ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ.)

ಪ್ರೌಢ ಶಾಲಾ ಶಿಕ್ಷಣ ಸಾರ್ವತ್ರೀಕರಣ ಹಿನ್ನೆಲೆಯಲ್ಲಿ 14 ರಿಂದ 18 ವರ್ಷ ವಯೋಮಿತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರೌಢ ಶಾಲಾ ಶಿಕ್ಷಣ ಲಭ್ಯವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾಣ್ಕೆಯನ್ನು ಹೊಂದಿರುವ ಕಾರ್ಯಕ್ರಮ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ. ಈ ಯೋಜನೆಯ ತರಬೇತಿ ಕೆಲಸವನ್ನು ಮಾತ್ರ ಡಿ.ಎಸ್.ಇ.ಆರ್.ಟಿ.ಮೂಲಕ ನಿರ್ವಹಿಸಲಾಗುತ್ತಿದೆ. ರಾಜ್ಯ ಮಟ್ಟದ ಪ್ರಧಾನ ಸಂಪನ್ಮೂಲ ವ್ಯಕ್ತಿಗಳ ತರಬೇತಿಯನ್ನು ಆಗಸ್ಟ್ 27, 2012 ರಿಂದ 21 ರ ನವಂಬರ್ 2012 ರವರೆಗೆ ಡಿ.ಎಸ್.ಇ.ಆರ್.ಟಿಯಲ್ಲಿ ನಡೆಸಲಾಗಿದೆ. ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ 192 ಪಾಥಮಿಕ ಶಾಲಾ ಶಿಕ್ಷಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ಯೋಜನೆಯಲ್ಲಿ ಎಸ್.ಟಿ.ಎಫ್. ತರಬೇತಿ, ಕಂಟೆಂಟ್ ಎನ್ರಿಚ್ಮೆಂಟ್ ಮತ್ತು ದೈಹಿಕ ಶಿಕ್ಷಕರ ತರಬೇತಿಗಳು ಇದ್ದು ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗಿದೆ. 29,914 ಎಸ್.ಡಿ.ಎಂ.ಸಿ ಸದಸ್ಯರು ಆರ್.ಎಂ.ಎಸ್.ಎ. ತರಬೇತಿಗಳ ಫಲಾನುಭವಿಗಳಾಗಿದ್ದಾರೆ. ಈ ಸಾಲಿನಲ್ಲಿ ಈ ಯೋಜನೆಯಡಿ ಸುಮಾರು ರೂ.3.86/- ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ.

ರಾಷ್ಟೀಯ ಜನಸಂಖ್ಯಾ ಶಿಕ್ಷಣ ಯೋಜನೆ (ಎನ್.ಪಿ.ಇ.ಪಿ.) :

ಈ ಯೋಜನೆಯಡಿಯಲ್ಲಿ ದೆಹಲಿಯ ಎನ್.ಸಿ.ಇ.ಆರ್.ಟಿ.ಯಿಂದ ಅನುಮೋದಿತ ಕ್ರಿಯಾ ಯೋಜನೆಯಲ್ಲಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 2012-13 ನೇ ಸಾಲಿಗೆ ರೂ. 4.00 ಲಕ್ಷ ಬಿಡುಗಡೆಯಾಗಿರುತ್ತದೆ. ಇದಲ್ಲದೆ ಕಳೆದ ವರ್ಷದ ಉಳಿಕೆ ಹಣವನ್ನು ಸೇರಿಸಿ ಸದರಿ ವರ್ಷಕ್ಕೆ ಸುಮಾರು ರೂ.7.78 ಲಕ್ಷಗಳ ಅನುದಾನ ಈ ಕಾರ್ಯಕ್ರಮಗಳಿಗೆ ಲಭ್ಯವಾಗಿದ್ದು, 2012-13 ನೇ ಸಾಲಿಗೆ ಒಟ್ಟು ರೂ.5,41,745/- ಗಳನ್ನು ಎನ್.ಪಿ.ಇ.ಪಿ. ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗಿದೆ.

ಹದಿ ಹರೆಯ ವಯಸ್ಸಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಪಡದೆ ಹಾಗೂ ಅಂಥವುಗಳಿಂದ ಹೊರಬಂದು ಬೌಧ್ಧಿಕ, ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದಿಕ್ಕಿನಲ್ಲಿ ಶಾಲಾ ಮಟ್ಟ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಪಾತ್ರಾಭಿನಯ ಮತ್ತು ಜನಪದ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ರೂ.5,41,745/- ಗಳ ವೆಚ್ಚದಲ್ಲಿ ನಡೆಸಲಾಗಿದೆ. ಶಾಲಾ ಮಟ್ಟ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಪಾತ್ರಾಭಿನಯ ಸ್ಪರ್ಧೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳಿಗೆ ದಿನಾಂಕ 09.11.2011 ರಂದು ಆರ್. ವಿ. ಟೀಚರ್ಸ್ ಕಾಲೇಜ್, ಜಯನಗರ, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ , ಮಂಡ್ಯ ರಾಜ್ಯ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತದೆ.

ಡಯಟ್ ಶಾಖೆ

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಉನ್ನತ ವ್ಯಾಸಂಗಕ್ಕೆ ನಿಯೋಜಿಸುವುದರಿಂದ ಸಂಬಂಧಿಸಿದ ವಿಷಯಗಳಲ್ಲಿ ಅವರ ಬೋಧನಾ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಜಿಲ್ಲಾ ಹಂತದಿಂದ ಬಂದ ಉನ್ನತ ವ್ಯಾಸಂಗದ ನಿಯೋಜನಾ ಪ್ರಸ್ತಾವನೆಗಳನ್ನು ರಾಜ್ಯ ಹಂತದಲ್ಲಿ ಕ್ರೋಢೀಕರಿಸಿ ಅನುಮೋದನೆ ನೀಡಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರಿಗೆ ಡಿಪ್ಲೋಮಾ ಇನ್ ಕಮ್ಯೂನಿಕೇಷನ್ ಇಂಗ್ಲಿಷ್ ಕೋರ್ಸ್ ಮಾಡುವುದರ ಮೂಲಕ ಇಂಗ್ಲೀಷ್ ಸಂವಹನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

2012-13 ನೇ ಸಾಲಿನಲ್ಲಿ ಈವರೆಗೆ ರಾಜ್ಯದ ಡಯಟ್ ಗಳ ಮೂಲಕ ಸುಮಾರು 45,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕನ್ನಡ, ಆಂಗ್ಲ, ಗಣಿತ, ವಿಜ್ಞಾನ, ಹಿಂದಿ, ಭೂಗೋಳ ವಿಷಯಗಳಲ್ಲಿ ತರಬೇತಿ, ಸಾಮಾಜಿಕ ಉಪಯುಕ್ತತೆಯಂಥ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿರುವ ಸಿ.ಟಿ.ಇ.ಗಳ ಮೂಲಕ 2012-13 ರ ಸಾಲಿನಲ್ಲಿ ಸುಮಾರು 11,200 ಪ್ರೌಢ ಶಾಲಾ ಶಿಕ್ಷಕರಿಗೆ ಕನ್ನಡ, ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನ ವಿಷಯಗಳ ಬೋಧನೆಯ ಬಗ್ಗೆ ತರಬೇತಿ ನೀಡಲಾಗಿದೆ.

ಶಿಕ್ಷಕರಿಗೆ ಪೂರ್ವ ಪರೀಕ್ಷೆ ಹಾಗೂ 3 ದಿನಗಳ ಪ್ರಾರಂಭಿಕ ಮುಖಾಮುಖಿ ತರಬೇತಿಗಳನ್ನು ಇ-ವಿದ್ಯಾ ಅಕಾಡೆಮಿ ನೆರವಿನಿಂದ ನೀಡಲಾಗಿದೆ. ಪ್ರತಿ ಡಯಟ್ ನಿಂದ ಇಬ್ಬರು ಹಿರಿಯ ಉಪನ್ಯಾಸಕರು / ಉಪನ್ಯಾಸಕರನ್ನು ನಿಯೋಜಿಸಿ ಆನ್ ಲೈನ್ ಫೆಸಿಲಿಟೇಸರ್ ಎಂಬ 1 ದಿನದ ತರಬೇತಿ ನೀಡಿದೆ ಹಾಗೂ ಕಛೇರಿಯಲ್ಲಿ ಮತ್ತು ಆಡಳಿತದಲ್ಲಿ ಕಂಪ್ಯೂಟರ್ ಬಳಸುವ ಬಗ್ಗೆ 5 ದಿನಗಳ ತರಬೇತಿಯನ್ನು ಡಯಟ್ ಉಪನ್ಯಾಸಕರು, ಬಿ.ಆರ್.ಸಿ., ಬಿ.ಆರ್.ಪಿ., ಸಿ.ಆರ್.ಪಿ ಹಾಗೂ ಇ.ಸಿ.ಒ.ಗಳಿಗೆ ಇ-ವಿದ್ಯಾ ಅಕಾಡೆಮಿ ಮೂಲಕ ನೀಡಿದೆ. ಇ-ವಿದ್ಯಾ ಅಕಾಡೆಮಿಯ ತರಬೇತಿ ಕಾರ್ಯಕ್ರಮಗಳಿಗಾಗಿ ರಾಜ್ಯದಲ್ಲಿ 3 ಇ-ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು (ಬೆಂಗಳೂರು ನಗರ ಡಯಟ್, ಧಾರವಾಡ ಡಯಟ್ ಮತ್ತು ಗುಲಬರ್ಗಾ ಸಿ.ಟಿ.ಇ.ಗಳಿಗೆ) ಇವುಗಳ ವತಿಯಿಂದ ಇಲಾಖೆಯ ಅಧಿಕಾರಿಗಳಿಗೆ/ ಶಿಕ್ಷಕರಿಗೆ ವಿವಿಧ ಕಂಪ್ಯೂಟರ್ ಆಧಾರಿತ ತರಬೇತಿಗಳನ್ನು ನೀಡಲಾಗಿದೆ.

ಕ್ರಿಯಾ ಸಂಶೋಧನೆ : ಡಯಟ್ ಮತ್ತು ಸಿ.ಟಿ.ಇ.ಗಳ ಹಿರಿಯ ಉಪನ್ಯಾಸಕರು ತಮ್ಮಲ್ಲಿ ಕನಿಷ್ಠ 5 ಕ್ರಿಯಾ ಸಂಶೋಧನೆಗಳಿಗೆ ಮಾರ್ಗದರ್ಶನ ಮಾಡುವಂತೆ ಸೂಚಿಸಲಾಗಿದೆ. ಡಯಟ್ ಗಳು ಈ ಕ್ರಿಯಾ ಸಂಶೋಧನೆಗಳನ್ನು ವಿಂಗಡಿಸಿ ಪ್ರಕಟಿಸಿದ್ದು ತಮ್ಮ ಜಿಲ್ಲೆಯಲ್ಲಿ ಪ್ರಚುರಪಡಿಸಿವೆ. ಡಿ.ಎಸ್.ಇ.ಆರ್.ಟಿ.ಯ ತಜ್ಞರಿಂದ ಡಯಟ್ ಮತ್ತು ಸಿ.ಟಿ.ಇ. ಉಪನ್ಯಾಸಕರನ್ನು ಸಂಶೋಧನಾ ಪದ್ದತಿಯಲ್ಲಿ ತರಬೇತುಗೊಳಿಸಲಾಗಿದೆ. 2011-12 ಮತ್ತು 2012-13 ರಲ್ಲಿ ಒಟ್ಟು 26 ಸಂಶೋಧನಾ ಯೋಜನೆಗಳನ್ನು ಮತ್ತು ಅಧ್ಯಯನಗಳನ್ನು ಡಯಟ್ ಗಳು ಕೈಗೊಂಡಿವೆ.