ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (NTSE)

NTSE ಪರೀಕ್ಷೆಯು 2 ಹಂತದ್ದಾಗಿದ್ದು, ಮೊದಲನೇ ಹಂತದ ರಾಜ್ಯ ಮಟ್ಟದ ಪರೀಕ್ಷೆಯನ್ನು DSERT ವತಿಯಿಂದ ನಡೆಸಲಾಗುತ್ತದೆ. 2 ನೇ ಹಂತದ ಪರೀಕ್ಷೆಯನ್ನು NCERT ನವದೆಹಲಿಯವರು ನಡೆಸುತ್ತಾರೆ. ಈ ಪರೀಕ್ಷೆಯ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದು.

ರಾಜ್ಯದಲ್ಲಿರುವ ಸರ್ಕಾರಿ ಅನುದಾನಿತ, ಅನುದಾನರಹಿತ ರಾಜ್ಯ ಹಾಗೂ ಕೇಂದ್ರ ಪಠ್ಯ ವಸ್ತು ಅನುಸರಿಸುತ್ತಿರುವ ಶಾಲೆಗಳಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿರುತ್ತದೆ. 2012-13 ನೇ ಸಾಲಿನ ಪ್ರಥಮ ಹಂತದ ಪರೀಕ್ಷೆಯು ರಾಜ್ಯದ 204 ಕೇಂದ್ರಗಳಲ್ಲಿ ನವಂಬರ್ 18 ರಂದು ನಡೆಯಿತು. ಇದರಲ್ಲಿ 53,863 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಆಯ್ಕೆಯಾಗಲಿರುವ 223 ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪರೀಕ್ಷೆಗೆ ಅರ್ಹರಾಗಲಿದ್ದಾರೆ. ರಾಷ್ರ್ಟ ಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕಲಿಕೆಯ ಕೊನೆಯ ಹಂತದವರೆಗೆ ಮಾಸಿಕ ರೂ. 500/-ರಂತೆ (MHRD ಪುರಸ್ಕೃತ) ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಗೆ ರೂ. 2000/- ರಂತೆ (SWF & TBF ಪುರಸ್ಕೃತ) ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುವುದು.

ನ್ಯಾಶನಲ್ ಮೀನ್ಸ್ -ಕಮ್- ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆ (NMMS)

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರೌಢ ಶಾಲೆಗಳಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಆಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಸಿಕ ರೂ.500/- ರಂತೆ 4 ವರ್ಷಗಳ ಕಾಲ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿರುತ್ತಾರೆ. ರಾಜ್ಯದ 5534 ವಿದ್ಯಾರ್ಥಿಗಳು ಇದರ ಸದಿಪಯೋಗ ಪಡೆಯಬಹುದಾಗಿದೆ.

ಈ ಯೋಜನೆಗೆ ಅರ್ಹರಾಗಲು ಪೋಷಕರ ವಾರ್ಷಿಕ ವರಮಾನ ರೂ.1,50,000ಗಳ ಮಿತಿಯೊಳಗಿರಬೇಕು ಹಾಗೂ ಎನ್.ಟಿ.ಎಸ್.ಇ. ಮಾದರಿಯಲ್ಲಿ ಜರುಗುವ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಭಾಗವಹಿಸಿ ಅರ್ಹತೆಯನ್ನು ಗಳಿಸಬೇಕು. ಈ ಯೋಜನೆಯ ಮುಖ್ಯ ಉದ್ದೇಶ 8ನೇ ತರಗತಿಯ ನಂತರ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಡೆಯುವುದು ಹಾಗೂ 8 ರಿಂದ 12ನೇ ತರಗತಿಯವರೆಗೆ ನಿರಂತರ ವ್ಯಾಸಂಗ ಮುಂದುವರೆಯುವಂತೆ ಮಾಡುವುದಾಗಿದೆ. ಈ ಸಾಲಿನ ನವಂಬರ್ 18 ರಂದು ರಾಜ್ಯದ 204 ಕೇಂದ್ರಗಳಲ್ಲಿ ಪರೀಕ್ಷೆಯು ನಡೆದಿದ್ದು, 1,28,854 ವಿದ್ಯಾರ್ಥಿಗಳು ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಇದರಲ್ಲಿ 5534 ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದೆ.