ಶಿಕ್ಷಣ ತಂತ್ರಜ್ಞಾನ ಘಟಕ 

ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣಕ್ಕೆ ತಾಂತ್ರಿಕತೆಯ ಒತ್ತು ಕೊಟ್ಟು ರೇಡಿಯೊ, ಶಿಕ್ಷಣ ಸಂವಾದ, ಶ್ರವಣ ಮತ್ತು ದೃಶ್ಯ ಮಾಧ್ಯಮ – ಟಿ.ವಿ., ಗಣಕ ಯಂತ್ರ, ಉಪಗ್ರಹ ಆಧಾರಿತ ದೂರ ಸಂಪರ್ಕ ತರಬೇತಿ ಕಾರ್ಯಕ್ರಮ ಇತ್ಯಾದಿಗಳ ಮುಖಾಂತರ ಶಿಕ್ಷಣ ನೀಡಿದಲ್ಲಿ ಶಿಕ್ಷಣ ಇನ್ನೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸುವುದೇ ಈ ತಂತ್ರಜ್ಞಾನ ಶಿಕ್ಷಣ ಘಟಕದ ಗುರಿ. ಈ ಘಟಕವು ಕೆಳಗೆ ನೀಡಿರುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಿದೆ.

ಗಣಕ ಮತ್ತು ಗಣಕ ಆಧಾರಿತ ಶಿಕ್ಷಣ: ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಕ ಹಾಗೂ ಗಣಕ ಆಧಾರಿತ ಶಿಕ್ಷಣ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಐ.ಸಿ.ಟಿ. ಯೋಜನೆ ಫೇಸ್- I : ಈ ಯೋಜನೆಯಡಿ 480 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಅವಧಿ ಒಟ್ಟು 5 ವರ್ಷಗಳದ್ದಾಗಿರುತ್ತದೆ. 31.03.2012 ಕ್ಕೆ ಐದು ವರ್ಷಗಳ ಮುಕ್ತಾಯವಾಗಿದ್ದು, 2013-14 ನೇ ಸಾಲಿನಲ್ಲಿ ಇದನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA) ಕಾರ್ಯಕ್ರಮದಡಿ ಸೇರ್ಪಡೆ ಮಾಡಿ ಗಣಕ ಶಿಕ್ಷಣ ನೀಡುವುದನ್ನು ಮುಂದುವರಿಸುವ ಬಗ್ಗೆ ಕ್ರಮ ಕೈ ಕೈಗೊಳ್ಳಲಾಗುವುದು.

ಐ.ಸಿ.ಟಿ. ಯೋಜನೆ ಫೇಸ್- II: ಈ ಯೋಜನೆಯಡಿಯಲ್ಲಿ 1571 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಗಣಕ ಹಾಗೂ ಗಣಕ ಆಧಾರಿತ ಶಿಕ್ಷಣವನ್ನು 2011-12 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 4,03,550 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ನಿರ್ವಹಣಾ ಸಂಸ್ಥೆಯಾದ ಎಡುಕಾಂಪ್ ಸಂಸ್ಥೆಯು ಶಾಲೆಗಳಿಗೆ ಗಣಕ ಯಂತ್ರ ಮತ್ತು ಇತರೆ ಪರಿಕರಗಳನ್ನು ಸರಬರಾಜು ಮಾಡಿ ಅಳವಡಿಸಿದೆ. ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ದಿನಾಂಕ 30.03.2013 ಕ್ಕೆ ಕರಾರಿನನ್ವಯ ಸದರಿ ಯೋಜನೆಯ 5 ವರ್ಷಗಳ ಅವಧಿ ಮುಕ್ತಾಯವಾಗುತ್ತಿದ್ದು, ಆರ್.ಎಂ.ಎಸ್.ಎ. ಅಡಿಯಲ್ಲಿ ಅಕ್ಟೋಬರ್ ನಂತರ ಸದರಿ ಶಿಕ್ಷಣವನ್ನು ಮುಂದುವರಿಸಲಾಗುವುದು.

ಐ.ಸಿ.ಟಿ. ಯೋಜನೆ ಫೇಸ್- III: ಈ ಯೋಜನೆಯಡಿಯಲ್ಲಿ 1763 ಸರ್ಕಾರಿ ಪ್ರೌಢ ಶಾಲೆ ಹಾಗೂ 2633 ಸರ್ಕಾರಿ ಅನುದಾನಿತ ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 2012-13 ನೇ ಸಾಲಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಮುಖಾಂತರ ಈ ಸಂಬಂಧ ಕರಾರು ಮಾಡಿಕೊಂಡಿದ್ದು ಕಾರ್ಯಾದೇಶ ನೀಡಲಾಗಿದೆ. 1763 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊಠಡಿ ಸಿದ್ಧತೆ ಪೂರ್ಣಗೊಂಡಿದ್ದು, 2633 ಅನುದಾನಿತ ಪ್ರೌಢ ಶಾಲೆಗಳಲ್ಲಿ ಈ ಕಂಪ್ಯೂಟರ್ ಸಿದ್ಧತೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಪೀಠೋಪಕರಣಗಳ ಸರಬರಾಜು ಪ್ರಕ್ರಿಯೆ ಹಾಗೂ ಕಂಪ್ಯೂಟರ್ ಹಾರ್ಡ್ವೇರ್ ಸರಬರಾಜು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಕಂಪ್ಯೂಟರ್ ಸರಬರಾಜು ಪ್ರಕ್ರಿಯೆಯನ್ನು 2012-13 ನೇ ಸಾಲಿನಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಆಯ್ದ ಶಾಲೆಗಳ ಶಿಕ್ಷಕರಿಗೆ ಪ್ರತಿ ಶನಿವಾರ ಶಾಲಾವಧಿ ಮುಗಿದ ನಂತರ ಕಂಪ್ಯೂಟರ್ ತರಬೇತಿಯನ್ನು (ಗರಿಷ್ಟ 30 ಶನಿವಾರಗಳಂದು) ನೀಡಲಾಗಿದೆ.

ಐ.ಸಿ.ಟಿ. ಫೇಸ್-I, ಫೇಸ್-II ಮತ್ತು ಫೇಸ್-III ಯೋಜನೆಗಳಿಗೆ ಒಟ್ಟು ರೂ. 15.79 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಒಟ್ಟು ರೂ.13.56 ಕೋಟಿ ಖರ್ಚಾಗಿರುತ್ತದೆ.

ಎಜುಸ್ಯಾಟ್ ಕಾರ್ಯಕ್ರಮ : ಎಜುಸ್ಯಾಟ್ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಡಿ.ಎಸ್.ಇ.ಆರ್.ಟಿ. ಯಲ್ಲಿ ಸ್ಟುಡಿಯೋ ಮತ್ತು ಹಬ್ ಗಳನ್ನು ಸ್ಥಾಪಿಸಲಾಗಿದ್ದು, ಚಾಮರಾಜನಗರ, ಗುಲ್ಬರ್ಗ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿನ 2603 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಸ್ರೊ ನೆರವಿನಿಂದ ಸ್ವೀಕೃತಿ ಕೇಂದ್ರಗಳನ್ನು ತೆರಯಲಾಗಿದೆ. ಒಟ್ಟು 458 ಚಿತ್ರಗಳನ್ನು ಪ್ರಸಾರಕ್ಕಾಗಿ ತಯಾರಿಸಲಾಗಿದ್ದು, ರಾಜ್ಯದ 202 ಬಿ.ಆರ್.ಸಿ. ಕೇಂದ್ರಗಳಲ್ಲಿ ಮತ್ತು ಎಲ್ಲಾ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಅಳವಡಿಸಿದ್ದು ಎಜುಸ್ಯಾಟ್ ಪಾಠ ಮತ್ತು ಉಪಗ್ರಹ ಆಧಾರಿತ ಕಾರ್ಯಕ್ರಮಗಳ ಸೌಲಭ್ಯ ಪಡೆಯಲಾಗುತ್ತಿದೆ.

ಈ ಕಾರ್ಯಕ್ರಮದ ಮೂಲಕ ಐದು ಜಿಲ್ಲೆಗಳಲ್ಲಿನ 2603 ಶಾಲೆಗಳಲ್ಲಿ 3.90 ಲಕ್ಷ ವಿದ್ಯಾರ್ಥಿಗಳಿಗೆ ನೋಡಿ ಕಲಿ, ಕೇಳಿ ಕಲಿ ರೀತಿಯ ಕಲಿಕೆಯುಂಟುಮಾಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ ಪರಿಷ್ಕೃತಗೊಂಡ 5 ರಿಂದ 8 ನೇ ತರಗತಿಯ ಪಠ್ಯ ಪುಸ್ತಕಗಳ ಕಲಿಕಾಂಶಗಳಿಗೆ ಹೊಸದಾಗಿ 60 ಪಾಠಗಳ ಚಿತ್ರ ರಚನೆಯನ್ನು ಹಿರಿಯ ಸಾಹಿತಿಗಳು ಮತ್ತು ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿನ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ. ಅರ್ಹ ಚಿತ್ರ ನಿರ್ಮಾಪಕರಿಂದ ಚಿತ್ರ ರಚನೆಯ ಕಾರ್ಯ ಪ್ರಗತಿಯಲ್ಲಿದೆ.

ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ : ಶೈಕ್ಷಣಿಕ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಡಿ.ಎಸ್.ಇ.ಆರ್.ಟಿ.ಯ ಸ್ಟುಡಿಯೋ ಮೂಲಕ ಹಮ್ಮಿಕೊಳ್ಳಲಾಗಿದೆ. ಶಾಲಾ ಶಿಕ್ಷಕರುಗಳಿಗೆ, ಸಿ.ಆರ್.ಸಿ., ಬಿ.ಆರ್.ಸಿ. ಗಳಿಗೆ ಹಾಗೂ ರಾಜ್ಯದ ವಿವಿಧ ಹಂತಗಳ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಸಭೆ, ತರಬೇತಿ, ಸಂವಾದ ಇತ್ಯಾದಿಗಳನ್ನು ನೇರವಾಗಿ ಟೆಲಿಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ರಾಜ್ಯದ 202 ಬಿ.ಆರ್.ಸಿ.ಗಳಲ್ಲಿ ಮತ್ತು ಎಲ್ಲಾ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳೊಂದಿಗೆ ದ್ವಿಮುಖ ಅಂತರ್ಕ್ರಿಯೆಗೆ ಅನುಕೂಲವಾಗುವಂತೆ ಎಸ್.ಐ.ಟಿ. ಸ್ಟುಡಿಯೋವನ್ನು ಡಿ.ಎಸ್.ಇ.ಆರ್.ಟಿ. ಯಲ್ಲಿ ಸಜ್ಜುಗೊಳಿಸಿ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಎಸ್.ಎಸ್.ಎ. ಅನುದಾನದಲ್ಲಿ ಸಿದ್ಧಪಡಿಸಿದೆ. 2012-13 ನೇ ಸಾಲಿನ ವರ್ಷದ ಅಂತ್ಯಕ್ಕೆ 461 ಗಂಟೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಸರ್ವ ಶಿಕ್ಷಣ ಅಭಿಯಾನ, ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತಿತರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಸ್ತರದ ಶೈಕ್ಷಣಿಕ ಭಾಗೀದರರಿಗೆ ಸಂವಹನಗೊಳಿಸಲಾಗುತ್ತಿದೆ.

ರೇಡಿಯೋ ಕಾರ್ಯಕ್ರಮ : 2012-13 ನೇ ಸಾಲಿನಲ್ಲಿ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪಠ್ಯಾಧಾರಿತ ರೇಡಿಯೋ ಪಾಠಗಳನ್ನು ತರಗತಿ 1 ರಿಂದ 8 ರವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಈ ಸಾಲಿನಲ್ಲಿ ಒಟ್ಟು 423 ರೇಡಿಯೋ ಪಾಠಗಳನ್ನು ಹಾಗೂ 15 ನೇರ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ವಿಚಾರಗಳನ್ನು ಪ್ರಸಾರ ಮಾಡುವ ಉದ್ದೇಶ ಹೊಂದಿದೆ. ಅಲ್ಲದೆ 3 ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯ 20 ಹೊಸ ಪಠ್ಯಗಳನ್ನು ಇ.ಡಿ.ಸಿ. ಯು ಸಿದ್ಧಪಡಿಸಿದ್ದು, ಪ್ರಸಾರವನ್ನು ಜುಲೈ 4 ರಿಂದ ಪ್ರಾರಂಭಿಸಲಾಗಿದೆ. ಇದೇ ಕಾರ್ಯಕ್ರಮದಡಿಯಲ್ಲಿ ರೇಡಿಯೋ ಪಾಠಗಳನ್ನು ಆಕಾಶವಾಣಿ ಕೇಂದ್ರದ ಮೂಲಕ ರಾಜ್ಯದ ಎಲ್ಲಾ ಶಾಲೆಗಳಲ್ಲೂ 3 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತಿ ದಿನ 3 ಅವಧಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ 5 ರಿಂದ 8 ನೇ ತರಗತಿಯ ಹೊಸ ಪಠ್ಯ ಪುಸ್ತಕಗಳಿಗೆ ಹೊಸದಾಗಿ 80 ರೇಡಿಯೋ ಪಾಠಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಧ್ವನಿ ಮುದ್ರಣ ಕಾರ್ಯವನ್ನು ಆಕಾಶವಾಣಿ ಕೇಂದ್ರ ಮತ್ತು ಪ್ರಾದೇಶಿಕ ಆಂಗ್ಲ ಭಾಷಾ ಸಂಸ್ಥೆ ಬೆಂಗಳೂರು ಎಂಬ ಸಂಸ್ಥೆಗಳಿಗೆ ವಹಿಸಿದ್ದು ಈ ಕಾರ್ಯ ಪ್ರಗತಿಯಲ್ಲಿದೆ.